ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ :

ಧಾರವಾಡ ಜಿಲ್ಲೆಯ
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಘಟಗಿಯಲ್ಲಿ 2025–26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌.ಎಸ್‌.ಎಸ್‌, ರೋವರ್ಸ್–ರೇಂಜರ್ಸ್, ಯುವ ರೆಡ್‌ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವು ಮೇ 23ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಶಾಲ್ಮಲಾ ಸಭಾಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್‌. ಲಾಡ್ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ವಿಶ್ವನಾಥ್ ಎಂ. ಕೊರವಿ, ಸಂಸ್ಥಾಪಕ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು, ಚೇತನ ಬಿಸಿನೆಸ್ ಸ್ಕೂಲ್, ಹುಬ್ಬಳ್ಳಿ ಅವರು ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಶಿಕ್ಷಣ ತಜ್ಞರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಶಿವಪೂಜಿ ವಿ. ತಡಸಮಠ ಅವರು ಉಪಸ್ಥಿತರಿರುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್. ಎಮ್. ಸಂಗಮ್ಮನವರ ಅವರು ವಹಿಸಲಿದ್ದಾರೆ.ಸಮಾರಂಭದಲ್ಲಿ ವಿದ್ಯಾರ್ಥಿಗಳು ವರ್ಷಪೂರ್ತಿ ಸಾಂಸ್ಕೃತಿಕ, ಕ್ರೀಡಾ, ಶೈಕ್ಷಣಿಕ, ಸಾಮಾಜಿಕ ಸೇವೆ ಹಾಗೂ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಶ್ರೇಷ್ಠತಾ ಗೌರವ, ಆದರ್ಶ ವಿದ್ಯಾರ್ಥಿ / ವಿದ್ಯಾರ್ಥಿನಿ ಪ್ರಶಸ್ತಿ, ಅತ್ಯುತ್ತಮ ಎನ್‌.ಎಸ್‌.ಎಸ್‌. ಸ್ವಯಂಸೇವಕ, ಶ್ರೇಷ್ಠ ರೋವರ್–ರೇಂಜರ್ ಗೌರವ ಸೇರಿದಂತೆ ವಿವಿಧ ಪ್ರಶಸ್ತಿ, ಗೌರವ ಪತ್ರಗಳು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ವಿದ್ಯಾರ್ಥಿಗಳ ಪ್ರತಿಭೆ, ನಾಯಕತ್ವ, ಸೇವಾ ಮನೋಭಾವ ಮತ್ತು ಶೈಕ್ಷಣಿಕ ಸಾಧನೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಕಾಲೇಜು ಒಕ್ಕೂಟದ ಕಾರ್ಯಧ್ಯಕ್ಷರಾದ ಡಾ.ಸಲೇಶಾ ಬೆಳಗಾಂ ಕೋರಿದ್ದಾರೆ.

Leave a Reply

Your email address will not be published. Required fields are marked *