ಕಲಘಟಗಿ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಘಟಗಿಯ ಕಲಾ ಮತ್ತು ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ಸಂಭ್ರಮ–2K26 – Stars of Memories” ಎಂಬ ವಿನೂತನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮವು ಶನಿವಾರ ಶಲ್ಮಲಾ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್.ಎಂ. ಸಂಗಮ್ಮನವರ ವಹಿಸಿ ಮಾತನಾಡಿದ ಅವರು, “ವಿದ್ಯಾರ್ಥಿ ಜೀವನವೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಪಾಠಗಳನ್ನು ಕೇಳಿ ಪರೀಕ್ಷೆ ಬರೆದು ಉತ್ತೀರ್ಣರಾಗುವುದಲ್ಲ. ಕಲಿತ ಜ್ಞಾನವನ್ನು ಅಂತರ್ಗತ ಮಾಡಿಕೊಂಡು ಕುಟುಂಬ, ಸಮಾಜ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಉತ್ಕೃಷ್ಟ ದೃಷ್ಟಿಕೋನವನ್ನು ರೂಪಿಸಿ, ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ಶ್ರದ್ಧೆಯಿಂದ ಅನುಷ್ಠಾನಗೊಳಿಸಿದಾಗ ಜೀವನ ಸಾರ್ಥಕವಾಗುತ್ತದೆ. ಅಂತಹ ಬದುಕು ಜಗತ್ತಿನ ಜೀವಜಗತ್ತಿಗೆ ಸದಾ ಸಂಭ್ರಮದಾಯಕವಾಗಿರುತ್ತದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಕೆ. ಅಂಗಡಿ ಉದ್ಘಾಟಿಸಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರುವುದು, ಸೃಜನಶೀಲತೆಯನ್ನು ಬೆಳೆಸುವುದು ಹಾಗೂ ಸಂಘಟನಾ ಕೌಶಲ್ಯಗಳನ್ನು ವಿಕಸನಗೊಳಿಸುವುದಕ್ಕೆ ‘ಸಂಭ್ರಮ’ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಅನಾವರಣಗೊಳ್ಳುವ ಪ್ರತಿಭೆಗಳು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ” ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ್ ಮನ್ನೋಪಂತರ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ.ಎಸ್. ಪಾಟೀಲ್, “ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣದಲ್ಲಿ ಗುರುಗಳಿಂದ, ಸ್ನೇಹಿತರಿಂದ ಹಾಗೂ ಅನುಭವಗಳಿಂದ ಕಲಿತ ವಿಚಾರಗಳನ್ನು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯೊಂದಿಗೆ ಪ್ರಾಯೋಗಿಕವಾಗಿ ಅಭಿವ್ಯಕ್ತಗೊಳಿಸಿ ಸಂಭ್ರಮಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಪ್ರೇರಣಾದಾಯಕ ಮಾತುಗಳನ್ನಾಡಿದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಗದೀಶ್ ಎಂ., “ವಿಭಿನ್ನ ಹಾಗೂ ನವೀನ ಶೈಲಿಯಲ್ಲಿ ಆಯೋಜಿಸಲಾದ ಈ ‘ಸಂಭ್ರಮ’ ಕಾರ್ಯಕ್ರಮದ ರೂಪರೇಷೆಗಳೇ ವಿದ್ಯಾರ್ಥಿಗಳ ಅದ್ಭುತ ಪ್ರತಿಭೆಗಳಿಗೆ ಸಾಕ್ಷಿಯಾಗಿದೆ. ನಿಮ್ಮೊಳಗೆ ಒಬ್ಬ ಶ್ರೇಷ್ಠ ಕಲಾವಿದ, ವಿಜ್ಞಾನಿ, ಉದ್ಯಮಶೀಲ ಮತ್ತು ರಾಷ್ಟ್ರ ನಿರ್ಮಾಪಕ ಅಡಗಿದ್ದಾನೆ ಎಂಬುದನ್ನು ಈ ವೇದಿಕೆಯಲ್ಲಿ ನೀವು ಪ್ರದರ್ಶಿಸಿದ ಹಾಡು, ನೃತ್ಯ, ಕನಸುಗಳ ಅನಾವರಣ ಹಾಗೂ ಭವಿಷ್ಯದ ಕುರಿತ ದೃಷ್ಟಿಕೋನಗಳು ಸಾಬೀತುಪಡಿಸಿವೆ. ಈ ಪಾಠಶಾಲೆಯಲ್ಲಿ ಕಲಿಯುವ ಬದುಕಿನ ಪಾಠಗಳು ನಿಮ್ಮ ಭವಿಷ್ಯದ ಸೌಧಕ್ಕೆ ಭದ್ರ ಬುನಾದಿಯಾಗಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಲೇಶಾ ಬೆಳಗಾಂ, ಪ್ರೊ. ವಿಜಯಕುಮಾರಿ ಚಿಲಕವಾಡ, ಡಾ. ಮಾಲತಿ ಹಿರೇಮಠ, ಶ್ರೀ ಮಂಜುನಾಥ ಕುರಿ, ಡಾ. ಪುಟ್ಟಪ್ಪ ಚಾರಿ, ಪ್ರೊ. ರಶ್ಮಿ ಕುರಕರೆ, ಶ್ರೀ ಎಸ್.ಡಿ. ಡಾಂಗೆ, ಶ್ರೀಮತಿ ಕುಸುಮಾ ಸಜ್ಜನ, ಡಾ. ಗಾಯತ್ರಿ ಉಪ್ಪಾರ, ಶ್ರೀಮತಿ ಲಕ್ಷ್ಮೀ ನರಗುಂದ, ಶ್ರೀ ಸಿದ್ದಪ್ಪ ಕಡ್ಲಿಕೊಪ್ಪ, ಕುಮಾರಿ ದೀಪಾ ಮರಾಠಿ, ಡಾ. ವಿನಾಯಕ ಬದ್ದಿ, ಜಾಕಿಯಾ ಸೌದಾಗರ್, ಪೂರ್ಣಿಮಾ ದೊಡ್ಡಮನಿ, ಗೌರಮ್ಮ ಬಾರ್ಕೇರ, ಶ್ರೀಮತಿ ರತ್ನ ಬಡಿಗೇರ, ಶ್ರೀಮತಿ ಅಂಜನಾ ಸೇರಿದಂತೆ ಅನೇಕ ಉಪನ್ಯಾಸಕರು ಉಪಸ್ಥಿತರಿದ್ದರು.
“ಸಂಭ್ರಮ–2K26” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ, ಜ್ಞಾನವರ್ಧಕ ಹಾಗೂ ಮನರಂಜನಾ ಚಟುವಟಿಕೆಗಳು ಪ್ರದರ್ಶನಗೊಂಡವು. ವಿದ್ಯಾರ್ಥಿಗಳು ನೃತ್ಯ, ಸಂಗೀತ, ಕಲಾತ್ಮಕ ಪ್ರದರ್ಶನಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಏಕತೆ, ಸ್ನೇಹ, ಸೃಜನಶೀಲತೆ ಹಾಗೂ ಸಹಭಾಗಿತ್ವ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು.
ಕಾರ್ಯಕ್ರಮದ ಯಶಸ್ಸಿಗೆ ಶ್ರೀಮತಿ ಬನದೇವಿ ಕುಡ್ಲನ್ನವರ, ಡಾ. ಶಶಿಕಲಾ ಎಸ್., ಶ್ರೀ ಈರಣ್ಣ ಹಳ್ಳಿಕೇರಿ ಹಾಗೂ ಶ್ರೀ ತ್ರಿವಿಕ್ರಮ ಕುಲಕರ್ಣಿ ಅವರು ಸಂಘಟನಾ ಕಾರ್ಯದರ್ಶಿಗಳಾಗಿ ಶ್ರಮಿಸಿದರು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದ ಸಕ್ರಿಯ ಸಹಭಾಗಿತ್ವದಿಂದ ಕಾರ್ಯಕ್ರಮವು ಸ್ಮರಣೀಯವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಕುಮಾರಿ ಭಾಗ್ಯ, ಕುಮಾರಿ ಕಾಶಮ್ಮ, ಗಿರಿಜಾ ಇಂಗಳಗಿ ಹಾಗೂ ದೀಪಾ ಪವಾರ ಅವರು “ಭವಿಷ್ಯದ ದಾರಿಗಳು” ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕುಮಾರಿ ಶೋಭಾ ಪಾಟೀಲ ಸ್ವಾಗತಿಸಿದರು. ಕುಮಾರಿ ಐಶ್ವರ್ಯ ಹೊಸಮನಿ ವಂದಿಸಿದರು. ಕುಮಾರಿ ಅಕ್ಷತಾ ಕೊಪ್ಪದ ಹಾಗೂ ಕುಮಾರಿ ಹೊನ್ನಮ್ಮ ಗುಡದಾಳ ಕಾರ್ಯಕ್ರಮ ನಿರೂಪಿಸಿದರು.






