ದೊಡ್ಡಾಟದ ಶ್ರೇಷ್ಠ ಕಲಾವಿದ ಅಡವಯ್ಯಸ್ವಾಮಿ

ಕಲಘಟಗಿ : ಅಡವಯ್ಯಸ್ವಾಮಿ ಅವರು ದೊಡ್ಡಾಟ ಕಲಾಪ್ರಕಾರದ ಶ್ರೇಷ್ಠ ಕಲಾವಿದರಾಗಿದ್ದರು, ಅವರಿಂದ ಎಷ್ಟೋ ಜನ ಶಿಷ್ಯರು ದೊಡ್ಡಾಟದ ಪರಂಪರೆ ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶಿವಣ್ಣ ಅದರಗುಂಚಿ ಹೇಳಿದರು.

ಅವರು ಪಟ್ಟಣದ ಹನ್ನೆರಡು ಮಠದಲ್ಲಿ ಆಯೋಜಿಸಲಾದ ದೊಡ್ಡಾಟ ಕಲಾವಿದರಾದ ಅಡವಯ್ಯಸ್ವಾಮಿ ಹಿರೇಮಠ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಅಡವಯ್ಯಸ್ವಾಮಿ ಅವರು ಎಂದೂ ಪ್ರಶಸ್ತಿ ಹಿಂದೆ ಹೋಗಿದ್ದಿಲ್ಲ ಅವರ ಪ್ರತಿಭೆಗೆ ಪ್ರಶಸ್ತಿಗಳು ಸಂದಿವೆ ಎಂದರು. ಕಲಾವಿದರ ಸೇವೆ ನೆನೆಯಲು ನುಡಿನಮನ ಕಾರ್ಯಕ್ರಮ ಮಾಡಿದ್ದು ಸ್ತುತ್ಯಾರ್ಹ ಎಂದರು.

ಜನಪದ ವಿದ್ವಾಂಸರಾದ ಎಂ ಆರ್ ತೋಟಗಂಟಿ ಮಾತನಾಡಿ ದೊಡ್ಡಾಟ ಹಿರಿಮೆಯನ್ನು ರಾಜ್ಯದಾದ್ಯಂತ ಪಸರಿಸಿದ ಶ್ರೇಯ ಅಡವಯ್ಯಸ್ವಾಮಿ ಅವರದು, ಬಡತನದಲ್ಲೇ ಕಲಾವಿದ ಕಷ್ಟ ಪಟ್ಟು ಕಲೆಗೆ ತನ್ನ ಬಾಳನ್ನು ಸಮರ್ಪಣೆ ಮಾಡಿದ್ದಕ್ಕೆ ಇದೊಂದು ಉದಾಹರಣೆ. ಮುಂದಿನ ಪೀಳಿಗೆ ಅಡವಯ್ಯಸ್ವಾಮಿ ಅಂತಹ ಶ್ರೇಷ್ಠ ಕಲಾವಿದರ ಬಗ್ಗೆ, ದೊಡ್ಡಾಟದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಎಂದರು.

ರಂಗಭೂಮಿ ಹಿರಿಯ ಕಲಾವಿದ ಬಸವರಾಜ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ದೊಡ್ಡಾಟ ಕಲಾ ಪ್ರಕಾರಕ್ಕೆ ಅಡವಯ್ಯಸ್ವಾಮಿ ಆಲದಮರದಂತೆ ಇದ್ದರು, ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹಲವಾರು ದೊಡ್ಡಾಟಗಳನ್ನು ಆಡಿಸಿದ ಅವರನ್ನು ಕಳೆದುಕೊಂಡು ಇಂದು ಕಲಾ ಪರಂಪರೆಗೆ ತುಂಬಾ ನಷ್ಟವಾಗಿದೆ. ತಾಲೂಕಿನ ಕಲಾವಿದರು ಹಿರಿಯರ ಮಾರ್ಗದರ್ಶನದಂತೆ ಕಲಾ ಸೇವೆ ಮಾಡೋಣ ಎಂದರು.

ಹಿರಿಯರಾದ ಹೆಚ್ ಎನ್ ಸುಣಗದ, ವೈ ಜಿ ಭಗವತಿ, ಅಶೋಕಕುಮಾರ್ ಅರ್ಕಸಾಲಿ, ಗಂಗಯ್ಯ ಹಿರೇಮಠ, ವೈ ಡಿ ಸುಳ್ಳದ, ಕುಬೇರಗೌಡ ಮುರಳ್ಳಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಡವಯ್ಯಸ್ವಾಮಿ ಅವರಿಗೆ ನುಡಿ ನಮನ ಸಲ್ಲಿಸಿದರು.
ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಬಸವರಾಜ ತಿಪ್ಪಣ್ಣವರ ನಿರೂಪಿಸಿದರು. ಸೋಮಲಿಂಗ ಒಡೆಯರ, ಗಿರೀಶ ರೆಡ್ಡಿ, ವೀರಣ್ಣ ಕುಬಸದ, ಸಾತಪ್ಪ ಕುಂಕೂರ, ನಾಗೇಶ್ ಗೌಳಿ, ಸೇರಿದಂತೆ ಅಡವಯ್ಯಸ್ವಾಮಿ ಹಿರೇಮಠ ಕುಟುಂಬಸ್ಥರು ಉಪಸ್ಥಿತರಿದ್ದರು.
ಚಿತ್ರ ಇದೆ : .

Leave a Reply

Your email address will not be published. Required fields are marked *